ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಜನಪದ ವೈದ್ಯ -
ಯಾವುದನ್ನು ಜನಸಾಮಾನ್ಯರು ಸಾಮಾನ್ಯವಾಗಿ ಹಳ್ಳಿವೈದ್ಯ, ನಾಟಿವೈದ್ಯ ಎಂದು ಕರೆಯುವರೋ ಅದನ್ನೇ ಶಾಸ್ತ್ರೀಯವಾಗಿ ಜನಪದ ವೈದ್ಯ ಎಂದು ಕರೆಯಬಹುದು. ಜಾನಪದದಲ್ಲಿ ಸಾಹಿತ್ಯಕ ಬಗೆ, ಭಾಷಿಕ ಬಗೆ ವೈಜ್ಞಾನಿಕ ಬಗೆ, ಕ್ರಿಯಾತ್ಮಕ ಬಗೆ ಎಂಬ ನಾಲ್ಕು ಬಗೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಜನಪದ ವೈದ್ಯ ವೈಜ್ಞಾನಿಕ ಬಗೆಗೆ ಸೇರುತ್ತದೆ. ಜನಪದರು ಕೆಲಸದ ಆಯಾಸ ನೀಗಿಕೊಳ್ಳಲು ಮತ್ತು ಸಂತೋಷಪಡಲು ಜನಪದ ಸಾಹಿತ್ಯ ಹಾಗೂ ಜನಪದ ಕಲೆಗಳನ್ನು ಸೃಷ್ಟಿಸಿದರು. ದೇವರಿಗೆ ಹೆದರಿ ಸಂಪ್ರದಾಯಗಳನ್ನು ಮತ್ತು ಹಬ್ಬಗಳನ್ನು ಆಚರಿಸಿದರು ; ಹಾಗೆಯೇ ತಮಗೆ ಬಂದ ರೋಗಗಳನ್ನು ಪರಿಹಾರ ಮಾಡಿಕೊಳ್ಳಲು ಜನಪದ ವೈದ್ಯವನ್ನು ಕಂಡುಕೊಂಡರು. ದಿನನಿತ್ಯದ ಜೀವನದಲ್ಲಿ ಜನಪದರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಎತ್ತಿಗೆ ಕಾಲು ಮುರಿದಿದೆ, ಮನೆಯಲ್ಲಿ ಯಾರಿಗೋ ಹಾವು ಕಚ್ಚಿದೆ, ಕುಡುಗೋಲಿನಿಂದ ಯಾವನೋ ಕೈ ಕುಯ್ದುಕೊಂಡಿದ್ದಾನೆ-ಇತ್ಯಾದಿ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು? ಈಗಿನ ಆಧುನಿಕ ಯುಗದಲ್ಲಿರುವಂತೆ ಆಸ್ಪತ್ರೆಗಳ ಸೌಕರ್ಯ ಅಂದು ಅವರಿಗೆ ಇರಲಿಲ್ಲ. ಆದರೆ ಸಮೃದ್ಧವಾದ ಪ್ರಕೃತಿ ಕಣ್ಣೆದುರಿಗೆ ಸುತ್ತಮುತ್ತ ಇತ್ತು. ಆವಶ್ಯಕತೆಯೇ ಸಂಶೋಧನೆಯ ಮೂಲ. ಮೇಲ್ಕಂಡ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬಂದಾಗ ಅವಕ್ಕೆ ಪರಿಹಾರಗಳನ್ನೂ ಜನಪದರೇ ಕಂಡುಕೊಳ್ಳಬೇಕಾಯಿತು. ಪ್ರಕೃತಿಯಲ್ಲಿ ದೊರೆಯುವ ಬಗೆಬಗೆಯ ಬೇರುಗಳು, ಎಲೆಗಳು, ಕಾಯಿಗಳು, ಹಣ್ಣುಗಳು, ಪ್ರಾಣಿಜನ್ಯವಾದ ವಸ್ತುಗಳು, ದಿನಬಳಕೆಯ ಸಾಮಾನ್ಯ ವಸ್ತುಗಳು ಎಲ್ಲವನ್ನೂ ಬುದ್ಧಿವಂತಿಕೆಯಿಂದ ಪ್ರಯೋಗಶೀಲತೆಯಿಂದ ಬಳಸಿಕೊಂಡು ರೋಗಗಳನ್ನು ಪರಿಹರಿಸಿಕೊಳ್ಳಲು ಅವರು ಯತ್ನಿಸಿದರು. ಒಂದೊಂದು ಕಾಯಿಲೆಯನ್ನೂ ಗುಣಪಡಿಸಲು ಒಂದೊಂದು ಔಷಧಿ ಬಳಸಬೇಕೆಂಬುದನ್ನು ಅನುಭವದಿಂದ ಅರಿತರು. ಇದರಿಂದಾಗಿ ಹೊಸ ವಿದ್ಯೆಯೊಂದು ತಿಳಿದಂತಾಯಿತು. ಹಸ್ತಗುಣ ಚೆನ್ನಾಗಿದ್ದ ಕೆಲವರು ಈ ಕ್ರಮಗಳನ್ನು ರೂಢಿಸಿಕೊಂಡರು. ತಂದೆಯಿಂದ ಮಗನಿಗೆ, ಗುರುವಿನಿಂದ ಶಿಷ್ಯನಿಗೆ ಪ್ರಸಾರವಾಯಿತು. ಈ ವಿದ್ಯೆಯಲ್ಲಿ ಪಾರಂಗತರಾದವರು ಆಯಾ ಪರಿಸರದಲ್ಲಿ ಹೆಚ್ಚು ಗೌರವ ಪಡೆದರು. ಜನಪದ ವೈದ್ಯ ಹುಟ್ಟಿದ, ಬೆಳೆದು ಬಂದ ಹಾಗೂ ಈವರೆಗೆ ಉಳಿದು ಬಂದಿರುವ ಕ್ರಮ ಹೀಗೆ ಎಂದು ಹೇಳಬಹುದು. ಇದೇ ಎಲ್ಲ ವೈದ್ಯದ, ಮುಖ್ಯವಾಗಿ ಆಯುರ್ವೇದದ ಮೂಲವೆನ್ನಬಹುದು.

	ಶಿಷ್ಟ ವೈದ್ಯ ಜನಪದ ವೈದ್ಯದಿಂದ ಇಂದಿಗೂ ಕಲಿಯಬೇಕಾದ ವಿಷಯ ಅಗಾಧವಾಗಿದೆ. ಹೀಗಾಗಬೇಕಾದರೆ ಜನಪದ ವೈದ್ಯದ ಸಂಗ್ರಹ ಮತ್ತು ಸಂಶೋಧನೆ ಅನಿವಾರ್ಯವಾಗುತ್ತದೆ. ಜಾನಪದದ ಪ್ರತಿಯೊಂದು ಪ್ರಕಾರದ ಸಂಗ್ರಹಾಕಾರ್ಯವೂ ಕಠಿಣವಾದುದು; ಅದರಲ್ಲಿಯೂ ಜನಪದ ವೈದ್ಯದ ಸಂಗ್ರಹವಂತೂ ಇನ್ನೂ ಹೆಚ್ಚು ಕಠಿಣವಾದುದು. ಜನಪದ ವೈದ್ಯ ಕೆಲವು ಜನರ ಕಸುಬಾಗಿರುವುದರಿಂದ ಅವರ ಜೀವನ, ಸಾಮಾಜಿಕ ಮರ್ಯಾದೆ ಮೊದಲಾದ ಅಂಶಗಳು ಅವರ ಆ ವೈದ್ಯರ ಮೇಲೆ ಅವಲಂಬಿತವಾಗಿರುವುದರಿಂದ ಸಂಗ್ರಾಹಕರಿಗೆ ಅವರು ತಮಗೆ ತಿಳಿದಿರುವ ವೈದ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಸುಲಭವಾಗಿ ತಿಳಿಸುವುದಿಲ್ಲ. ಸಂಗ್ರಾಹಕರನ್ನು ಸಂಶಯ ದೃಷ್ಟಿಯಿಂದ ನೋಡುತ್ತಾರೆ. ತಮ್ಮ ವೈದ್ಯದ ಗುಟ್ಟನ್ನು ಬೇರೆಯವರಿಗೆ ತಿಳಿಸಿದರೆ ಅವರಿಂದ ತಮ್ಮ ಅಸ್ತಿತ್ವಕ್ಕೆ ಭಂಗ ಬರುವುದೆಂದು ಹೆದರುತ್ತಾರೆ; ಬಗೆಬಗೆಯ ನೆಪಗಳನ್ನು ಒಡ್ಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವೈದ್ಯವಿವೇಕ ಅನರ್ಹರ ಕೈಸೇರಿ ಹಾಳಾಗಬಹುದು ಎಂಬ ಹೆದರಿಕೆಯೂ ಅವರಿಗುಂಟು. ಹೀಗಾಗಿ ಜನಪದ ವೈದ್ಯರ ಸಂಗ್ರಹ ಅತ್ಯಂತ ಕಠಿಣವಾದ ಕೆಲಸವಾಗಿ ಪರಿಣಮಿಸಿದೆ. ಇಷ್ಟು ಕಠಿಣವಾದ ಪರಿಸ್ಥಿತಿ ಇದ್ದರೂ ಇಂದು ನಾಗರೀಕತೆಯ ಪ್ರಭಾವಕ್ಕೆ ಸಿಕ್ಕಿ ನಶಿಸಿ ಹೋಗುತ್ತಿರುವ ಜನ ಪದ ವೈದ್ಯವನ್ನು ಸಂಗ್ರಹಮಾಡಿ ಉಳಿಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಜಾನಪದ ಸಂಗ್ರಾಹಕನ ಆದ್ಯ ಕರ್ತವ್ಯವಾಗಿದೆ. ಈ ರೀತಿ ಹೇಳಿದಾಕ್ಷಣ ಜನಪದ ವೈದ್ಯದಲ್ಲಿ ದೊರೆಯುವ ಪ್ರತಿಯೊಂದು ಔಷಧಿಯೂ ಸರ್ವೋತ್ಕøಷ್ಟ ಎಂದಲ್ಲ. ಹಾಗೆಯೇ ಜನಪದ ವೈದ್ಯದಲ್ಲಿ ಒಬ್ಬ ಜಾನಪದ ಸಂಗ್ರಾಹಕನ ಕೆಲಸ ಜನಪದ ವೈದ್ಯವನ್ನು ಸಂಗ್ರಹಮಾಡಿ, ಪ್ರಕಟಿಸುವುದೇ ಹೊರತು, ಅದರ ಬಗ್ಗೆ ನಿರ್ಣಾಯಕವಾದ ಮಾತನ್ನಾಡಿ, ಜನರಿಗೆ ಆ ಔಷಧಿಗಳನ್ನೇ ಉಪಯೋಗಿಸಿ ಎಂದು ಸಲಹೆ ಮಾಡುವುದಿಲ್ಲ. ಈ ಬಗೆಯ ಸಂಶೋಧನ ಕಾರ್ಯ ವೈದ್ಯರಿಗೆ ಸೇರಿದ್ದು. ಸಂಗ್ರಹವಾಗಿ, ಪ್ರಕಟಿತವಾಗಿರುವ ಜನಪದ ವೈದ್ಯದಲ್ಲಿ ಮೂಢನಂಬಿಕೆಯಿಂದ ಕೂಡಿದ ಅರ್ಥಹೀನವಾದ ಹಾಗೂ ಹಾನಿಕಾರಕವಾದ ಅಂಶಗಳು ಯಾವುವು, ನಿಜವಾದ ವೈಜ್ಞಾನಿಕ ಮೌಲ್ಯವುಳ್ಳವು ಯಾವುವು ಎಂಬುದನ್ನು ನಿಷ್ಕರ್ಷೆ ಮಾಡಿ ಅನಂತರ ಅವುಗಳಲ್ಲಿ ಜನ ಬಳಸಬಹುದಾಗಿರುವ ಔಷಧಿಗಳಾವುವು ಎಂಬುದನ್ನು ಸಲಹೆಮಾಡುವ ಜವಾಬ್ದಾರಿ ವೈದ್ಯರಿಗೆ ಸೇರಿದ್ದು. ಜನಪದ ವೈದ್ಯರ ಅಧ್ಯಯನದಿಂದ ವೈದ್ಯರು ಬೇರೆಬೇರೆ ಹೊಸ ಹೊಸ ಔಷಧಿಗಳನ್ನು ಕಂಡುಹಿಡಿಯಬಹುದು. ಹೀಗಾಗಿ ನೂತನ ಸಂಶೋಧನೆಗಳಿಂದ ಜನಪದ ವೈದ್ಯ ಸಹಾಯಕವಾಗಿ ಪರಿಣಮಿಸಬಹುದು.	

ಮನೋವೈದ್ಯ, ಪಶುವೈದ್ಯ, ಮಕ್ಕಳ ವೈದ್ಯ, ಬಸುರಿ-ಬಾಣಂತಿ ವೈದ್ಯ, ಸಾಮಾನ್ಯ ವೈದ್ಯ ಎಂಬ ವಿಭಾಗಗಳಲ್ಲಿ ಜನಪದ ವೈದ್ಯದ ಸ್ವರೂಪವನ್ನು ವಿವರಿಸಬಹುದು. ಇವು ಮಾತ್ರವಲ್ಲದೆ ಚಿಕ್ಕಪುಟ್ಟ ಶಸ್ತ್ರಚಿಕಿತ್ಸೆಗಳನ್ನೂ ಜನಪದ ವೈದ್ಯದಲ್ಲಿ ಗುರುತಿಸಲು ಸಾಧ್ಯ. ಮನೋವೈದ್ಯ ಜನಪದ ವೈದ್ಯದಲ್ಲಿ ಪ್ರಧಾನವಾದ ಸ್ಥಾನ ಪಡೆದಿದೆ. ಮನಸ್ಸಿನ ಮೇಲೆ ಪ್ರೇರಣೆ ಉಂಟುಮಾಡುವ ಪರಿಣಾಮ ಎಷ್ಟೆಂಬುದು ಮನೋವಿಜ್ಞಾನವನ್ನು ಓದಿದ ಎಲ್ಲರಿಗೂ ತಿಳಿದಿರುವ ವಿಷಯ. ಜನಪದ ವೈದ್ಯದ ವಿವರಗಳನ್ನು ಪರಿಶೀಲಿಸಿದಾಗ ಅಲ್ಲಿನ ರೋಗಗಳಿಗೆ ಪ್ರೇರಣೆಯೇ ಮೂಲವಾಗಿದ್ದು. ಮನಸ್ಸಿನ ಪರಿಣಾಮ ದೇಹದ ಮೇಲೆ ಆಗಿರುವುದರಿಂದ ಉಂಟಾಗಿರುವ ಮನೋದೈಹಿಕ ರೋಗಗಳು ಸಾಕಷ್ಟಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ರೀತಿಯ ರೋಗಗಳ ಲಕ್ಷಣಗಳ ವಿವರಗಳು, ಚಿಕಿತ್ಸಾಕ್ರಮಗಳು-ಇವುಗಳ ಸಂಗ್ರಹ ಹಾಗೂ ಅಧ್ಯಯನ ಜನಪದ ವೈದ್ಯದಲ್ಲಿ ಪ್ರಮುಖವಾದ ಶಾಖೆಯಾಗುತ್ತದೆ. ಮಂತ್ರ, ಮಾಟ, ದೃಷ್ಟಿ ತೆಗೆಯುವುದು, ದೆವ್ವ ಬಿಡಿಸುವುದು, ದೇವರ ಪೂಜೆ ಮಾಡಿ ತೀರ್ಥ ಕೊಡುವುದು ಮೊದಲಾದ ಸಂದರ್ಭಗಳಲ್ಲೆಲ್ಲ ಜನಪದ ವೈದ್ಯರು ರೋಗಿಗಳಿಗೆ ಕೊಡುವುದು ಮನಶ್ಚಿಕಿತ್ಸೆ ಎಂದೇ ಹೇಳಬಹುದು. ಉದಾಹರಣೆಗೆ ಕೆಟ್ಟ ಕಣ್ಣಿನಿಂದ ಉಂಟಾದ ದೃಷ್ಟಿದೋಷವನ್ನು ಪರಿಹರಿಸಲು ಜನಪದರು ಮಾಡುವ ಚಿಕಿತ್ಸೆಗಳನ್ನು ಗಮನಿಸಬಹುದು. ಕೆಲವು ಜನರಲ್ಲಿ ಕೆಟ್ಟ ಕಣ್ಣು ಉಂಟೆಂದೂ ಅಂಥ ಜನ ಮಕ್ಕಳನ್ನು ದೃಷ್ಟಿಸಿ ನೋಡಿದಾಗ ಅವಕ್ಕೆ ಹೊಟ್ಟೆ ನೋವು ಬರುವುದೆಂದೂ ನಂಬುತ್ತಾರೆ. ಈ ನಂಬಿಕೆಯೇ ಒಂದು ಪ್ರೇರಣೆಯಾಗಿ ಪರಿಣಮಿಸಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ಕೆಟ್ಟ ಕಣ್ಣಿನ ದೃಷ್ಟಿದೋಷವನ್ನು ಹೋಗಲಾಡಿಸಲು ನೆಟಿಗೆ ಮುರಿಯುವುದು, ಕೆಂಡದ ರಾಜು ಹಾಕುವುದು, ಉರಿಯುತ್ತಿರುವ ಹಂಚಿಕಡ್ಡಿಗಳನ್ನು ನಿವಾಳಿಸುವುದು, ಮೂರು ದಾರಿಗಳು ಕೂಡುವೆಡೆ ದಾಟು ಹಾಕುವುದು- ಈ ಬಗೆಯ ಕೆಲಸಗಳನ್ನು? ಮಾಡುತ್ತಾರೆ. ಈ ಕ್ರಮಗಳೂ ಪ್ರೇರಣೆಗಳೇ. ಈ ಕ್ರಮಗಳಿಂದ ತಮ್ಮ ಹೊಟ್ಟೆನೋವು ಹೋಗುವುದೆಂಬ ನಂಬಿಕೆ ಜನರಿಗಿರುವುದರಿಂದ, ಮನಸ್ಸಿನ ಆ ಪ್ರೇರಣೆಯ ಕಾರಣದಿಂದಲೇ ಹೊಟ್ಟೆ ನೋವು ವಾಸಿಯಾಗುವುದುಂಟು. ಮಾಟಕ್ಕೆ ಪ್ರತಿಮಾಟ ಮಾಡುವುದು, ದೆವ್ವ ಹಿಡಿದವರಿಗೆ ದೆವ್ವ ಬಿಡಿಸುವುದು-ಇವುಗಳಲ್ಲಿಯೂ ನಾವು ಕಾಣವುದು ಪ್ರೇರಣೆ ಮತ್ತು ಪ್ರತಿಪ್ರೇರಣೆಗಳ ಪರಿಣಾಮವನ್ನು, ಆದಿವಾಸಿ ಸಮಾಜಗಳ ಮಾಟ ವೈದ್ಯ, ಪಾದ್ರಿ, ಶಾಮನ್ ಮೊದಲಾದವರು ಈ ರೀತಿಯ ಮನೋವೈದ್ಯವನ್ನೇ ಮಾಡುತ್ತಿದ್ದರು. ಜನಪದ ವೈದ್ಯವನ್ನು ಸಂಗ್ರಹಮಾಡುವವರು ಈ ಬಗೆಯ ವಿವರಗಳನ್ನೂ ಸಂಗ್ರಹಿಸಬೇಕು. ಜನಪದ ವೈದ್ಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಕ್ಕೆ ನನ್ನ 'ಜನಪದ ವೈದ್ಯ-ಸಂಪಾದಿತ ಗ್ರಂಥ ನೋಡಬಹುದು.

	ಪಶುಗಳಿಗೆ ಸಾಮಾನ್ಯವಾಗಿ ಲರಡು (ಲಲ್ಡು) ಸೆಲೆ, ಕುಂದು, ಹರುಪತಿ, ದೊಡ್ಡರೋಗ, ಚಪ್ಪೆರೋಗ, ಅಳ್ಲೇರೋಗ, ಕಾಲುಜ್ವರ, ಬಾಯಿಜ್ವರ, ಪಿನಾಸಿ ಮೊದಲಾದ ರೋಗಗಳು ಬರುತ್ತವೆ. ಇವು ಮಾತ್ರವಲ್ಲದೆ ಕಾಲು, ಕೋಡು ಮುರಿದುಹೋಗುವುದುಂಟು; ಹೆಗಲು ಬಾತುಕೊಳ್ಳುತ್ತದೆ. ಉಣ್ಣೆ ಹತ್ತುತ್ತದೆ. ಕಣ್ಣು ಬಿಳುಪಾಗುತ್ತದೆ, ಶರೀರದಲ್ಲಿ ಗಾಯಗಳಾಗಿ ಹುಳುಬೀಳುತ್ತದೆ. ಕರುಗಳಲ್ಲಿ ಜಂತಹುಳು ಆಗುತ್ತದೆ, ದನಗಳು ಮುಂಗಾರು ಜೋಳ ತಿಂದು ಸೊಕ್ಕುತ್ತವೆ, ಇದ್ದಕ್ಕಿದ್ದಂತೆ ಹಸುಗಳ ಹಾಲು ಕಡಿಮೆಯಾಗುತ್ತದೆ, ಹಸುಗಳು ಎಮ್ಮೆಗಳು ಕರು ಹಾಕಿದಾಗಿ ಸತ್ತೆ ಬೀಳುವುದು ಕಷ್ಟವಾಗುತ್ತದೆ-ಹೀಗೆ ಬಗೆಬಗೆಯಾದ ತೊಂದರೆಗಳುಂಟಾಗುತ್ತವೆ. ಪಶುವೈದ್ಯದಲ್ಲಿ ಪರಿಣತನಾದ ವ್ಯಕ್ತಿ, ಈ ರೋಗಗಳ ಲಕ್ಷಣಗಳನ್ನು ಚೆನ್ನಾಗಿ ತಿಳಿದಿರುವುದರಿಂದ ರೋಗ ಯಾವುವೆಂಬುದನ್ನು ತಿಳಿದು ಅದಕ್ಕೆ ಬೇಕಾದ ಔಷಧಿ ಹಾಕಿ ರೋಗವನ್ನು ವಾಸಿಮಾಡುತ್ತಾನೆ. ಉದಾ : ಕಾಲುಜ್ವರ: ದನಗಳ ಗೊರಸಿನ ಸಂದಿನಲ್ಲಿ ಊದಿಕೊಂಡು ಕೀವು ಬರುತ್ತದೆ. ನೀರಿನಲ್ಲಿ ಓಡಾಡಿದಾಗ ಗಾಯ ಹೆಚ್ಚಾಗಿ ಕೀವು ಸುರಿಯುವುದು ಮಾತ್ರವಲ್ಲದೆ ಹುಳುಬೀಳಲು ಆರಂಭವಾಗುತ್ತದೆ. ಕಾಲನ್ನು ಮುಟ್ಟಿದರೆ ಹೆಚ್ಚಾಗಿ ಬಿಸಿಯಾಗಿರುತ್ತದೆ. ಈ ಲಕ್ಷಣಗಳು ಕಂಡುಬಂದಾಗ ಅದನ್ನು ಕಾಲುಜ್ವರ ಎಂದು ಗುರುತಿಸುತ್ತಾರೆ. ಆಗ ಮೀನನ್ನು ತಂದು ಅದನ್ನು ನೀರಿನೊಡನೆ ಒಂದು ಕಲ್ಲಿನ ಮೇಲೆ ತಿಕ್ಕಿ, ಮೀನುತಿಕ್ಕಿದ ನೀರನ್ನು ಕಾಲಿನ ಗೊರಸಿನ ಮೇಲೆ ಪ್ರತಿನಿತ್ಯ ಹಾಕುತ್ತ ಬಂದರೆ ಕಾಲುಜ್ವರ ಕಡಿಮೆಯಾಗುತ್ತ ಬಂದು ಕ್ರಮೇಣ ಹೊರಟು ಹೋಗುತ್ತದೆ. ದನಕರುಗಳಿಗೆ ಮಾತ್ರವಲ್ಲದೆ, ಎಮ್ಮೆ ಕೋಣಗಳು, ಆಡು, ಹಂದಿ, ಕುರಿ, ಕೋಳಿ ಮೊದಲಾದ ಪ್ರಾಣಿಗಳಿಗೂ ಬರುವ ಬಗೆಬಗೆಯ ಕಾಯಿಲೆಗಳಿಗೆ ಜನಪದ ವೈದ್ಯದಲ್ಲಿ ಪರಿಹಾರಗಳನ್ನು ಕಾಣಬಹುದು. ಸರಳವಾದ ಔಷಧಿಗಳಿರುವಂತೆಯೇ ಸಂಕೀರ್ಣ ಸ್ವರೂಪದ ಔಷಧಿಗಳೂ ಉಂಟು.
	
ಮಕ್ಕಳಿಗೆ ಬರುವ ರೋಗಗಳಲ್ಲಿ ಕೆಲವು ಹುಟ್ಟಿನಿಂದ ಬರುತ್ತವೆ ; ಮತ್ತೆ ಕೆಲವು ಹುಟ್ಟಿದ ಅನಂತರ ಬರುತ್ತವೆ. ರೋಗಗಳು ಬಂದ ಮೇಲೆ ಅವನ್ನು ಹೋಗಲಾಡಿಸುವುದಕ್ಕೆ ಬದಲಾಗಿ ರೋಗಗಳು ಬರದಂತೆಯೇ ಮುಂಜಾಗರೂಕತೆ ವಹಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಬಸುರಿಗೆ ಕೆಲವು ವಿಶೇಷವಾದ ಔಷಧಿಗಳನ್ನು ಕೊಡುವುದರ ಮೂಲಕ ಮಗು ಆರೋಗ್ಯಕರವಾಗುವಂತೆ ಮಾಡುತ್ತಾರೆ. ತಾಯಿ ತಿನ್ನುವ ಆಹಾರದ ಕಾರಣದಿಂದಾಗಿ ಮಗುವಿಗೆ ರೋಗಬರುವುದಂಟು. ಈ ಕಾರಣದಿಂದ ಮಗು ಆರೋಗ್ಯವಾಗಿರಬೇಕಾದರೆ ಬಾಣಂತಿ ಹೆಚ್ಚು ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಮಕ್ಕಳಿಗೆ ಬರುವ ಇತರ ರೋಗಗಳಲ್ಲಿ ಹಕ್ಕಿ ಕಡುಕನ ರೋಗ, ವಾಯು, ಹೊಟ್ಟೆನೋವು, ಹೊಟ್ಟೆ ಉಬ್ಬರ, ಲಾಳ ಸಂಕಾಲೆ, ಬಾಲಗ್ರಹ, ವಿಷಬು, ಕೆಮ್ಮು ಮೊದಲಾದ ಶೀತಸಂಬಂಧವಾದ ಕಾಯಿಲೆಗಳಿವೆ. ಬಸುರಿಯವರಿಗೆ ಬಾಣಂತಿಯರಿಗೆ ಅವರಿಗೇ ಸೀಮಿತವಾದ, ವಿಶಿಷ್ಟವಾದ ಕಾಯಿಲೆಗಳು ಬರುತ್ತವೆ. ಈ ಕಾಯಿಲೆಗಳ ಸ್ವರೂಪವನ್ನು ಮನೆಯಲ್ಲಿನ ಹಿರಿಯ ಹೆಂಗಸರು ತಿಳಿದಿರುತ್ತಾರೆ. ಅವರೇ ಸೂಲಗಿತ್ತಿಯ ಕೆಲಸವನ್ನೂ ಮಾಡುವುದುಂಟು. ಇಂದಿಗೂ ಅನೇಕ ಸಂಸಾರಗಳಲ್ಲಿ ಬಸುರಿ ಬಾಣಂತಿಯರಿಗೆ ಆಸ್ಪತ್ರೆ ಔಷಧಿ ಕೊಡುವುದಿಲ್ಲ. ಮನೆವೈದ್ಯವನ್ನೇ ಮಾಡುತ್ತಾರೆ. ನಾರು ಬೇರುಗಳ ಕಷಾಯ, ಲೇಹ್ಯ, ಅವಲೇಪ, ಊಟೋಪಚಾರಗಳ ಎಚ್ಚರಿಕೆ, ಶುಶ್ರುಷೆ-ಇತ್ಯಾದಿಗಳಿಂದ ಆಗಬಹುದಾದ ಅನೇಕ ತೊಂದರೆಗಳನ್ನು ಸುಲಭವಾಗಿ ನಿವಾರಿಸುವ ವೈದ್ಯ ಮನೆಯ ಹಿರಿಯರಿಗೆ ಗೊತ್ತಿರುತ್ತದೆ.

	ಈವರೆಗೆ ವಿಚಾರ ಮಾಡಿದ ವೈದ್ಯವಿಧಾನಗಳು ಜನಪದ ವೈದ್ಯದಲ್ಲಿ ವಿಶಿಷ್ಟ ಬಗೆಯವು. ಈಗ ವಿಚಾರ ಮಾಡಬೇಕಾಗಿರುವುದು ಸಾಮಾನ್ಯವಾಗಿ ಎಲ್ಲರಿಗೂ ಅನ್ವಯವಾಗುವ ಸಾಮಾನ್ಯ ವೈದ್ಯ. ಇಲ್ಲಿ ಸಾಮಾನ್ಯ ಎಂಬ ಪದ ಸಾಧಾರಣವಾದುದು ಎಂಬ ಅರ್ಥದಲ್ಲಿ ಪ್ರಯೋಗವಾಗಿಲ್ಲ; ಸಾಮಾನ್ಯವಾಗಿ ಎಲ್ಲರಿಗೂ ಬರುವ ನೆಗಡಿ, ಕೆಮ್ಮು, ವಾಂತಿ, ಭೇದಿ ಮೊದಲಾದ ದಿನನಿತ್ಯದ ಕಾಯಿಲೆಗಳಿಗೆ ಮಾಡುವ ಚಿಕಿತ್ಸೆಗಳು-ಎಂಬ ಅರ್ಥದಲ್ಲಿ ಪ್ರಯೋಗವಾಗಿದೆ. ಈ ವೈದ್ಯದಲ್ಲಿ ಪ್ರಥಮ ಚಿಕಿತ್ಸೆಗಳೂ ಸೇರುತ್ತವೆ. ಇಲ್ಲಿ ಬಳಸುವ ಔಷಧಿಗಳು ಸರಳ ಸ್ವರೂಪದವಾಗಿರುತ್ತವೆ; ಸಂಕೀರ್ಣವಾದ ಔಷಧಿಗಳೂ ಕೆಲವು ಸಲ ಬಳಕೆಯಾಗುತ್ತವೆ. ಸರಳವಾದ ಔಷಧಿಗಳು ಹೆಚ್ಚು ಖರ್ಚಿಲ್ಲದೆ ದೊರೆಯುತ್ತವೆ, ಉದಾ: ಉಗುರುಸುತ್ತು ಆದಾಗ ಒಂದು ಕೋಳಿ ಮೊಟ್ಟೆಯನ್ನು ಒಡೆದು, ಅದನ್ನು ಬೆರಳಿನೊಳಕ್ಕೆ ತೂರಿಸಿ ಇಟ್ಟು ಬಟ್ಟೆ ಕಟ್ಟಿದರೆ ಕೋಳಿಮೊಟ್ಟೆ ಉಗುರುಸುತ್ತಿನಲ್ಲಿ ಇರುವ ಕೀವನ್ನು ಹೀರುತ್ತದೆ. ಕೆಲವು ದಿನಗಳಲ್ಲಿ ಉಗುರುಸುತ್ತು ವಾಸಿಯಾಗುತ್ತದೆ. ಮೊಟ್ಟೆಯ ಬದಲಿಗೆ ನಿಂಬೆ ಹಣ್ಣನ್ನು ಬಳಸುವುದೂ ರೂಢಿಯಲ್ಲಿದೆ. ಎಳೆಗೂಸಿಗೆ ಕೊಡುವ ಬಜೆ, ಅತಿಮಧುರ ಮೊದಲಾದ ಸುತ್ತುಕಾರ ಇನ್ನೊಂದು ಒಳ್ಳೆಯ ಔಷಧ, ಇಂಥ ಸರಳವಾದ ಔಷಧಿಗಳು ಜನಪದ ವೈದ್ಯದಲ್ಲಿ ಹಲವಾರು ದೊರೆಯುತ್ತವೆ. ಸಂಕೀರ್ಣ ಔಷಧಿಗಳಿಗೆ ಕಷಾಯಗಳು ಉತ್ತಮ ಉದಾಹರಣೆ. ಬಗೆಬಗೆಯ ಸೊಪ್ಪುಗಳನ್ನು ನಾರಬೇರುಗಳನ್ನು ಹಾಕಿ ಕಷಾಯಗಳನ್ನು ತಯಾರಿಸುತ್ತಾರೆ. ಇದರಲ್ಲಿ ಬೇವಿನ ಚಕ್ಕೆ ಬಹು ಮುಖ್ಯವಾದುದು. ಈ ಕಷಾಯಗಳು ಹಲವಾರು ಕಾಯಿಲೆಗಳಿಗೆ ಪರಿಹಾರ ನೀಡುತ್ತವೆ. ಕೆಲವಾರು ಪ್ರಾಣಿಗಳಿಂದ ತೆಗೆದ ಕೊಬ್ಬುಗಳೂ ತುಪ್ಪಗಳೂ ಕೂಡ ಜನಪದ ವೈದ್ಯದಲ್ಲಿ ಸೇರುತ್ತವೆ. ಉದಾ: ಮೊಸಳೆ ಕೊಬ್ಬು, ಕೆರೆ ಹಾವಿನ ತುಪ್ಪ ಇತ್ಯಾದಿ.	

	ಜನಪದ ವೈದ್ಯದಲ್ಲಿ ಬಳಕೆಯಾಗುವ ವಸ್ತುಗಳು ಸುಲಭವಾಗಿ ದೊರಕುವಂಥವು. ವಿಪರೀತವಾಗಿ ಹಣ ಸುರಿದು ತರಬೇಕಾದ ವಸ್ತುಗಳಲ್ಲ. ಅವುಗಳಲ್ಲಿ ಬಹುಪಾಲಿನವು ಆ ಸುತ್ತುಮುತ್ತಲೇ ಸಿಗುವಂಥವೂ ಆಗಿವೆ. ಜೇನುತುಪ್ಪ, ನಿಂಬೆಹಣ್ಣು, ಬಗೆಬಗೆಯ ಸೊಪ್ಪುಗಳು, ತುಳಸಿ ತಾಮ್ರದ ತಗಡು, ಸಗಣಿ, ವೀಳೆಯದೆಲೆ, ಬಾಲೆಯ ಕರೆ, ಶುಂಠಿ, ಹೊಗೆಸೊಪ್ಪು, ಹಾಲು, ಕೋಳಿಮೊಟ್ಟೆ, ಹರಳೆಣ್ಣೆ, ಉಪ್ಪು, ಮೆಣಸಿನಕಾಯಿ, ಲೋಳಿಸರ, ಅರಸಿನದ ಕೊನೆ, ಬಜೆ ಕೊನೆ, ಮಜ್ಜಿಗೆ, ದೊಡ್ಡಪತ್ರೆ, ತುಂಬೆಸೊಪ್ಪು, ಎಕ್ಕದ ಎಲೆ, ಜೇಡನಬಲೆ, ನಂದಿಬಟ್ಟಲ ಹೂ-ಮೊದಲಾದ ಹಲವಾರು ಪದಾರ್ಥಗಳು ಜನಪದ ವೈದ್ಯದಲ್ಲಿ ಬಳಕೆಯಾಗುತ್ತವೆ. ಜನಪದ ವೈದ್ಯದ ಸಂಗ್ರಹ ಅಚ್ಚುಕಟ್ಟಾಗಿ ನಡೆದು ಸಂಗ್ರಹವಾದ ವಿಷಯ ಸಾಮಗ್ರಿಯ ಬಗ್ಗೆ ಸೂಕ್ತ ಅಧ್ಯಯನ ಸಂಶೋಧನೆಗಳು ನಡೆದು ಅಧಿಕೃತವಾದ ಕೆಲವು ಔಷಧಿಗಳನ್ನು ವೈದ್ಯರು ಪತ್ತೆ ಮಾಡಬೇಕು. ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ವಿಷಯದಲ್ಲಿ ಆಸಕ್ತಿ ತೋರಿಸಬೇಕು.							(ಟಿ.ಎನ್.ಎಸ್.ಎನ್.)